ದುಶ್ಯಲೆ:-
ಧೃತರಾಷ್ಟ್ರ ಮತ್ತು ಗಾಂಧಾರಿಯರ ಏಕಮಾತ್ರ ಪುತ್ರಿ, ಕೌರವರ ಕಿರಿಯ ಸಹೋದರಿ. ಸಿಂಧೂದೇಶದ ರಾಜ ವೃದ್ಧಕ್ಷತ್ರನ ಮಗ ಜಯದ್ರಥನ ಹೆಂಡತಿ. ಈಕೆಗೆ ಇಬ್ಬರು ಮಕ್ಕಳು. ಒಬ್ಬ ದ್ರೌಪದೀ ಸ್ವಯಂವರ ಸಮಯದಲ್ಲಿ ಕೌರವರ ಪರವಾಗಿ ಹೋರಾಡಿ ಅರ್ಜುನನಿಂದ ಸತ್ತ. ಮತ್ತೊಬ್ಬ ಪಾಂಡವರ ಅಶ್ವಮೇಧಯಾಗಕ್ಕೆ ಮೊದಲು ಅರ್ಜುನ ದಿಗ್ವಿಜಯಕ್ಕೆ ಬಂದಿರುವನೆಂಬ ಸುದ್ದಿ ಕೇಳಿ ಸತ್ತ. ದುಶ್ಯಲೆ ದುಃಖಿಸುತ್ತ ತನ್ನ ಮೊಮ್ಮಕ್ಕಳೊಡನೆ ಅರ್ಜುನನ ಬಳಿಗೆ ಬಂದು ತನ್ನ ಪತಿ ಹಿಂದೆ ಮಾಡಿದ ಅಪರಾಧಗಳನ್ನೆಲ್ಲ ಕ್ಷಮಿಸಿ, ಈ ಬಾಲಕನನ್ನು ಅನುಗ್ರಹಿಸು ಎಂದು ಬೇಡಿದಳು. ಅರ್ಜುನ ಪ್ರಸನ್ನನಾಗಲು ದುಶ್ಯಲೆ ತನ್ನ ಕಡೆಯ ಯೋಧರನ್ನು ಕರೆದುಕೊಂಡು ಅರಮನೆಗೆ ಬಂದಳು. ಈ ವೃತ್ತಾಂತ ಮಹಾಭಾರತದಲ್ಲಿ ಬಂದಿವೆ. 					(ಡಿ.ಎನ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ